ಕಲೂಗಾ ಆಬ್ಲಾಸ್ಟ್‌ : ಮಾಸ್ಕೋದ ನೈಋತ್ಯಕ್ಕೆ ಸುಮಾರು ೨೯,೯೦೦ ಚ.ಕಿಮೀ ಪ್ರದೇಶವನ್ನು ಹೊಂದಿರುವ ಕಲೂಗಾ ಆಬ್ಲಾಸ್ಟ್‌ ಡ್ಯಸ್ನ ಮತ್ತು ಅಕ ನದಿಗಳ ನಡುವೆ ಇದೆ. ಇದರ ಮೂರನೆಯ ಒಂದು ಭಾಗ ಕಾಡುಗಳಿಂದ ಆವೃತ. ವಾಯವ್ಯ ಹಾಗೂ ದಕ್ಷಿಣದ ಭಾಗಗಳು ಜೇಡಿಮಣ್ಣಿನಿಂದ ಕೂಡಿವೆ. ಇವು ನಾರಿನ ಬೆಳೆಗಳಿಗೆ ಅನುಕೂಲಕರ. ಜೇನು ಮತ್ತು ಬಾತು ಕೋಳಿಯನ್ನು ಸಾಕುತ್ತಾರೆ. ಈ ಪ್ರದೇಶ ಕೃಷಿಯಲ್ಲಿ ಅಂಥ ಹೆಸರೇನೂಗಳಿಸಿಲ್ಲ. ಸುಮಾರು ಮೂರನೆಯ ಒಂದು ಭಾಗದಷ್ಟು ಹಳ್ಳಿಗರು ಹೊಸದಾಗಿ ನಿರ್ಮಿತವಾದ ನಗರಗಳಿಗೆ ವಲಸೆಹೋಗಿ ಅಲ್ಲಿಯೇ ನೆಲಸಿದ್ದಾರೆ. ಇವುಗಳ ಪೈಕಿ ಓಬ್ನಿನ್ಸ್ಕ್‌ ಪ್ರಮುಖವಾದದ್ದು. ೧೯೫೭ರಲ್ಲಿ ಈ ನಗರದಲ್ಲಿ ಪರಮಾಣುಶಕ್ತಿ ಸಂಶೋಧನ ಕೇಂದ್ರವನ್ನು ಸ್ಥಾಪಿಸಲಾಯಿತು.

ಈ ಪ್ರದೇಶದ ದೊಡ್ಡ ಕೈಗಾರಿಕೆಗಳು ಇದರ ರಾಜಧಾನಿಯಾದ ಕಲೂಗಾ ಮತ್ತು ಇತರ ದೊಡ್ಡ ಪಟ್ಟಣಗಳಲ್ಲಿ ಕೇಂದ್ರೀಕೃತವಾಗಿವೆ. ಯಂತ್ರೋಪಕರಣ ಉಣ್ಣೆ ಹಾಗೂ ಹತ್ತಿಯಬಟ್ಟೆ, ಕಾಗದ, ಬೆಂಕಿಪೆಟ್ಟಿಗೆ, ಗಾಜು ಇವು ಮುಖ್ಯಕೈಗಾರಿಕೆಗಳು. ಸೋವಿಯತ್ ದೇಶದ ಅತ್ಯಂತ ಹಳೆಯ ಕೈಗಾರಿಕಾ ಘಟಕಗಳು ಇರುವುದು ಈ ಪ್ರದೇಶದಲ್ಲಿ. ಅವುಗಳಲ್ಲಿ ೧೮ನೆಯ ಶತಮಾನದಲ್ಲೇ ಸ್ಥಾಪಿತವಾದವು. ಈ ಆಡಳಿತ ಪ್ರದೇಶದ ನಿರ್ಮಾಣವಾದದ್ದು ೧೯೪೪ರಲ್ಲಿ. 	(ಬಿ.ಎನ್.ಎ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ